ಉತ್ತಂಗಿಚನ್ನಪ್ಪ: 1881-1962. ಅಸ್ತವ್ಯಸ್ತಗೊಂಡು ತಾರುಮಾರಾಗಿದ್ದ ಸರ್ವಜ್ಞನ ವಚನಗಳನ್ನು ಶಾಸ್ತ್ರೀಯವಾಗಿ ಅಣಿಗೊಳಿಸಿ, ಅವನ ವಾಣಿಯನ್ನು ಮನೆ ಮನೆಗೆ ತಲುಪಿಸಿ ಅವನ ಸಮಗ್ರ ದರ್ಶನವನ್ನು ಮಾಡಿಸಿದ ಕೀರ್ತಿವಂತರು. ಕ್ರೈಸ್ತಧರ್ಮದ ಉಪದೇಶಕರು. ಇವರ ಪೂರ್ಣ ಹೆಸರು ರೆವರೆಂಡ್ ಚನ್ನಪ್ಪ ದಾನಿಯೇಲಪ್ಪ ಉತ್ತಂಗಿ. ಇವರ ಕಾವ್ಯನಾಮ ತಿರುಳ್ಗನ್ನಡ ತಿರುಕ. ಇವರ ಹಿರಿಯರು ಬಳ್ಳಾರಿ ಜಿಲ್ಲೆಯ ಉತ್ತಂಗಿಯಲ್ಲಿದ್ದರು. ಕಾರಣಾಂತರದಿಂದ ವೀರಶೈವ ಧರ್ಮದಿಂದ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡು ಕಾಲ ಕ್ರಮೇಣ ಧಾರವಾಡದಲ್ಲಿ ನೆಲಸಿದರು. ಚನ್ನಪ್ಪನವರು 1881 ಡಿಸೆಂಬರ್ 9ರಂದು ಧಾರವಾಡದಲ್ಲಿ ಜನಿಸಿದರು. ತಂದೆ ದಾನಿಯೇಲಪ್ಪನವರು ಅಲ್ಲಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ರಾಗಿದ್ದರು. ಧಾರವಾಡ, ಗದಗ, ಬೆಟಗೇರಿಗಳಲ್ಲಿ ಚನ್ನಪ್ಪನವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ನಡೆಯಿತು. ಇವರು ಬುದ್ಧಿವಂತ ರಾಗಿದ್ದರೂ ವ್ಯಾಸಂಗದಲ್ಲಿ ಆಸಕ್ತಿ ವಹಿಸಲಿಲ್ಲವಾಗಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ. ಯಂತ್ರವಿe್ಞÁನ ವನ್ನು ಕಲಿಯಬೇಕೆಂದು ಆಶಿಸಿದರು. ಬಡತನದಿಂದ ಅದು ಸಾಧ್ಯವಾಗಲಿಲ್ಲ. ಕೊನೆಗೆ ತಾಯಿಯ ಅಪೇಕ್ಷೆಯಂತೆ ತಮ್ಮ 21ನೆಯ ವಯಸ್ಸಿನಲ್ಲಿ ಮಂಗಳೂರಿಗೆ ಹೋಗಿ ಅಲ್ಲಿಯ ಕ್ರೈಸ್ತಧರ್ಮ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿದರು. ಅನಂತರ ಅಲ್ಲಿಯ ಬಾಸೆಲ್ ಸಂಸ್ಥೆಯಲ್ಲಿ ಉಪದೇಶಕ ವೃತ್ತಿಯನ್ನು ಕೈಗೊಂಡರು (1908). ಮುಂದೆ ಧಾರವಾಡ, ಹುಬ್ಬಳ್ಳಿ, ಹಾವೇರಿ, ಗದಗ ಮುಂತಾದ ಸ್ಥಳಗಳಲ್ಲಿ ಉಪದೇಶಕರಾಗಿ ಸು.33 ವರ್ಷಗಳ ಕಾಲ ಸೇವೆಸಲ್ಲಿಸಿ 1942ರಲ್ಲಿ ನಿವೃತ್ತರಾದರು. 

ಚಿಕ್ಕಂದಿನಿಂದಲೂ ಧಾರ್ಮಿಕ ಒಲವಿನವರಾಗಿದ್ದ ಇವರು ತತ್ವe್ಞÁನದಲ್ಲಿ ಆಸಕ್ತಿವಹಿಸಿ, ಅನೇಕ ತಾತ್ವಿಕ ಗ್ರಂಥಗಳನ್ನು ಸ್ವತಂತ್ರವಾಗಿ ವ್ಯಾಸಂಗಮಾಡಿದರು. ಉಪದೇಶಕ ವೃತ್ತಿಯನ್ನು ಕೈಗೊಂಡ ಮೇಲೂ ತಮ್ಮ ಈ ಅಧ್ಯಯನವನ್ನು ಮುಂದುವರೆಸಿ ಕ್ರೈಸ್ತಧರ್ಮದ ಜತೆಗೆ ಪ್ರಾಚ್ಯ ಮತ್ತು ಪಾಶ್ಚಾತ್ಯ ತತ್ತ್ವದರ್ಶನಗಳ ವ್ಯಾಸಂಗ ಮಾಡಿದರಲ್ಲದೆ ಅನುಭವದ ಆಗರಗಳಾದ ಉಪನಿಷತ್ತು, ಭಗವದ್ಗೀತೆಗಳ ಜತೆಗೆ ಪ್ಲೇಟೋ. ಕಾಂಟ್, ಬ್ರಾಡ್ಲೆ, ವಿಲಿಯಂಜೇಮ್ಸ್‌ ಮುಂತಾದವರ ಗ್ರಂಥಗಳನ್ನು ಓದಿ ವಿಚಾರ ಶಕ್ತಿಯನ್ನು ಬೆಳೆಸಿಕೊಂಡರು. 

ಕ್ರೈಸ್ತಧರ್ಮದ ಉಪದೇಶಕರಾಗಿದ್ದ ಚನ್ನಪ್ಪನವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದರು. 1915ರಲ್ಲಿ ಬರೆವಣಿಗೆಯನ್ನು ಆರಂಬಿsಸಿದ ಇವರು ಒಟ್ಟು 18 ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳನ್ನು ಎರಡು ವಿಭಾಗ ಮಾಡಬಹುದು. 1. ಕ್ರೈಸ್ತಧರ್ಮಕ್ಕೆ ಸಂಬಂದಿsಸಿಉಣ್ಣೆ:ದುದು. 2. ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಭಾರತೀಯ ಸಂಸ್ಕೃತಿಗಳಿಗೆ ಸಂಬಂದಿsಸಿದುದು. ಸಾಹಿತ್ಯಾರಾಧನೆಯೇ ಈ ಎಲ್ಲದರ ಘನ ಉದ್ದೇಶ. 

ಚನ್ನಪ್ಪನವರ ಮೊದಲ ಕೃತಿ ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ (1921). ಯೇಸುಕ್ರಿಸ್ತನ ಜೀವನವನ್ನು ತುಲನಾತ್ಮಕವಾಗಿ ಅಧ್ಯಯನಮಾಡಿ ಶಾಸ್ತ್ರೀಯ ದೃಷ್ಟಿಯಿಂದ ಬರೆದದ್ದು. ಅನಂತರ ಹಿಂದೂ ಸಮಾಜದ ಹಿತಚಿಂತಕ (1921) ಎಂಬ ಗ್ರಂಥವನ್ನು ಪ್ರಕಟಿಸಿದರು. ಭಾರತದಲ್ಲಿರುವ ಜಾತಿಭೇದದ ಬಗ್ಗೆ ಶಾಸ್ತ್ರೀಯ ವಿವೇಚನೆಯನ್ನು ಈ ಗ್ರಂಥದಲ್ಲಿ ಮಾಡಿದ್ದಾರೆ. ಮಕ್ಕಳ ಶಿಕ್ಷಣಪಟ (1923) ಎಂಬುದು ಮಕ್ಕಳ ಶಿಕ್ಷಣಕ್ಕೆ ಸಂಬಂದಿsಸಿದ ಗ್ರಂಥ. 

ಸಾಹಿತ್ಯ ರಂಗದಲ್ಲಿ ಚನ್ನಪ್ಪನವರಿಗೆ ಶಾಶ್ವತವಾದ ಕೀರ್ತಿಯನ್ನು ತಂದುಕೊಟ್ಟದ್ದು, ಸರ್ವಜ್ಞ ವಚನಗಳು (1924) ಎಂಬ ಇವರ ಸಂಪಾದಿತ ಗ್ರಂಥ. ಸುಮಾರು 9 ವರ್ಷಗಳ ದೀರ್ಘಕಾಲ ಈ ಗ್ರಂಥದ ಸಂಪಾದನೆಯ ಕಾರ್ಯಕ್ಕೆ ದುಡಿದ ಇವರು 2000 ವಚನಗಳನ್ನು ಪರಿಷ್ಕರಿಸಿದ್ದಾರೆ. ಈ ಗ್ರಂಥಕ್ಕೆ ಬರೆದಿರುವ 108 ಪುಟಗಳ ಉಪೋದ್ಘಾತದಲ್ಲಿ ಸರ್ವಜ್ಞನ ಪೂರ್ವೋತ್ತರ ಮತ್ತು ಅವನ ವ್ಯಕ್ತಿತ್ವ ಕುರಿತು ಮನಮುಟ್ಟುವಂತೆ ವಿವರಿಸಿದ್ದಾರೆ. ಸರ್ವಜ್ಞ ವಚನಗಳನ್ನು ಪಾರಮಾರ್ಥಿಕ ಮತ್ತು ಲೌಕಿಕ ವಿಚಾರಗಳೆಂದು ವಿಭಾಗಿಸಿ ಅಣಿಗೊಳಿಸಿದ್ದಾರೆ. ಈ ಕೃತಿ ಬಹು ಬೇಗ ಜನಪ್ರಿಯವಾಯಿತು. ಆಗಿನ ಮೈಸೂರು ಸರ್ಕಾರ ಈ ಗ್ರಂಥದ ಸ್ವಾಮ್ಯವನ್ನು ಚನ್ನಪ್ಪನವರಿಂದ ಪಡೆದು, ಸುಲಭ ಬೆಲೆಯ ಆವೃತ್ತಿಗಳ ಮಾಲೆಯಲ್ಲಿ ಪ್ರಕಟಿಸಿತು. ಈ ಗ್ರಂಥ ಸರ್ವಜ್ಞ ವಚÀನಗಳ ಅಕಾರಾದಿಯನ್ನು ಒಳಗೊಂಡಿದೆ. ಸಾಹಿತ್ಯಆವೃತ್ತಿ (1924), ಜೇಬಿನಆವೃತ್ತಿ (1935), ಜನಪದಆವೃತ್ತಿ (1935) ಮತ್ತು ಅಗ್ಗದಆವೃತ್ತಿ (1941)- ಹೀಗೆ ನಾಲ್ಕು ಆವೃತ್ತಿಗಳಲ್ಲಿ ಪ್ರಕಟಗೊಂಡಿರುವ ಏಕೈಕ ಗ್ರಂಥವಿದು. 

ಭಾರತೀಯ ಕ್ರೈಸ್ತ ಹಾಗೂ ದೇಶಪ್ರೇಮಿಯಾಗಿದ್ದ ಮಹಾರಾಷ್ಟ್ರದ ಪ್ರಸಿದ್ಧ ಕವಿ ನಾರಾಯಣ ವಾಮನ ತಿಲಕರನ್ನು ಕುರಿತು ಜೆ.ಸಿ.ವಿನ್ಸೊ ಅವರು ಇಂಗ್ಲಿಷಿನಲ್ಲಿ ಬರೆದಿದ್ದ ಗ್ರಂಥವನ್ನು ಚನ್ನಪ್ಪನವರು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ (1927). ಇವರ ಇನ್ನೊಂದು ಅನುವಾದ ದೃಷ್ಟಾಂತದರ್ಪಣ (1939); 500 ದೃಷ್ಟಾಂತಗಳ ಸಂಗ್ರಹ.

ವೀರಶೈವಧರ್ಮ ಮತ್ತು ಸಿದ್ಧಾಂತಗಳಲ್ಲಿ ಪರಿಶ್ರಮ ಪಡೆದಿದ್ದ ಚನ್ನಪ್ಪನವರು ಮೋಳಿಗೆ ಮಾರಯ್ಯ ಮತ್ತು ರಾಣಿಮಹಾದೇವಿಯವರ ವಚನಗಳು (1950), ಆದಯ್ಯನ ವಚನಗಳು (1957) ಎಂಬ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಸಿದ್ಧರಾಮ ಸಾಹಿತ್ಯ ಸಂಗ್ರಹ (1955) ಇವರ ಇನ್ನೊಂದು ಸಂಪಾದಿತ ಗ್ರಂಥ, ದೀರ್ಘವಾದ ಉಪೋದ್ಘಾತ ಮತ್ತು ವಿಮರ್ಶೆಗಳನ್ನು ಒಳಗೊಂಡಿದ್ದು ವಚನ ಸಾಹಿತ್ಯದಲ್ಲಿ ಇವರು ನಡೆಸಿದ ಸಂಶೋಧನೆಗೆ ಸಾಕ್ಷಿಯಂತಿದೆ. ಅನುಭವಮಂಟಪ : ಹಾರ್ಟ್ ಆಫ್ ಲಿಂಗಾಯಿತ್ ರಿಲಿಜಿನ್ ಎಂಬುದು ಇವರ ಒಂದು ಇಂಗ್ಲಿಷ್ ಗ್ರಂಥ. 

ಹೀಗೆ ನಾನಾ ವಿಧದಲ್ಲಿ ಕ್ರೈಸ್ತಧರ್ಮ, ನಾಡು ಮತ್ತು ನುಡಿಗಳ ಸೇವೆಯನ್ನು ಮಾಡಿದ ಚನ್ನಪ್ಪನವರನ್ನು 1949ರಲ್ಲಿ ಗುಲ್ಬರ್ಗದಲ್ಲಿ ನಡೆದ 32ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಲಾಯಿತು. ಇವರ ಸಂಪಾದಿತ ಕೃತಿ ಸಿದ್ಧರಾಮ ಸಾಹಿತ್ಯ ಸಂಗ್ರಹಕ್ಕೆ ದೇವರಾಜ ಬಹದ್ದೂರ್ ದತ್ತಿ ಬಹುಮಾನ ಲಬಿsಸಿದೆ. ಚನ್ನಪ್ಪನವರು 1962 ಆಗಸ್ಟ್‌ 28ರಂದು ನಿಧನರಾದರು. ಇವರ ನಿಧನಾನಂತರ ಮೃತ್ಯುಂಜಯ (1963), ಲಿಂಗಾಯಿತ ಧರ್ಮ ಮತ್ತು ಕ್ರೈಸ್ತಧರ್ಮ (1969) ಎಂಬ ಎರಡು ಗ್ರಂಥಗಳು ಪ್ರಕಟವಾದವು.		

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ